ಸ್ಮಶಾನ ವೈರಾಗ್ಯ

ಎತ್ತಿ ಆಡಿಸಿದ ಕೈಗಳು , ಕಟ್ಟಿ
ಎದೆಗಪ್ಪಿರಲು
ನೂರಾರು ಮೈಲಿ ಜೊತೆ ನಡೆದ
ಕಾಲುಗಳು ಮರಗಳಂದದಿ
ಮಡಚಿ ಚಕ್ಕುಲೂರಿರಲು
ಸಂಸಾರದ ಬೆನ್ನೆಲುಬಾದ ಬೆನ್ನು
ಕುಲುಮೆಗೆ ಮುಖಮಾಡಿರಲು
ಹಸನ್ಮುಖಿಗೆ ಮೆರಗಿಟ್ಟ ಕಣ್ಗಳಿಗೆ
ಬೆಳಕು ಬೇಡವಾಗಿರಲು
ಬಾಳಿನುಸಿರಾದ ಹೊಳ್ಳೆಗಳಿಗೆ
ಹತ್ತಿ , ಹೊದಿಕೆಯಾಗಿರಲು
ಪ್ರಾಣ, ಪ್ರಕೃತಿಯ ಮಡಿಲು
ಸೇರಿರಲು
ನಿರ್ದಯಿ ನೇಸರನೆದುರು ನಾ
ಅಸಹಾಯಕನಾಗಿರಲು
ಅಂಧಕಾರದಂದದಿ ಆವರಿಸಿತ್ತು ನನ್ನ, 
ಸ್ಮಶಾನ ವೈರಾಗ್ಯ

ಕಂಡ ಕನಸುಗಳ ಅರ್ಥ ಮರೆಯಾಗಿ
ಗೆದ್ದದ್ದು, ಗಳಿಸಿದ್ದೆಲ್ಲ , ವ್ಯರ್ಥವೇ ಆಗಿ
ಬಣ್ಣ ಬಣ್ಣದ ಲೋಕ,  ಸುಟ್ಟಂತೆ
ಕರುಕಲಾಗಿ
ಜೀವನದ ಅರ್ಥ ಸಾರ್ಥಕಥೆಗಳು
ಅನರ್ಥವಾಗಿ
ಇರುವಿಕೆಯ ಮೇಲೆ ಪ್ರಶ್ನೆಗಳ ಮಳೆ
ಸುರಿಯುತ್ತಿದ್ದ ನನಗಾಗ ಕಾರ್ಮೋಡವಾದದ್ದು
ಸ್ಮಶಾನ ವೈರಾಗ್ಯ

ನೀ ಆ ಘಳಿಗೆಗೆ ನನ್ನ ಮನಸ್ಥಿತಿಯ ಆಳಿದ
ಸಾಮ್ರಾಟನೇ ಇರಬಹುದು
ಜಗದ ಮಾಯೆ ನಿನ್ನನುಂಗಿ ಹಾಕಿದೆ ಇಂದು.
ನಿದ್ದೆ ಮಾಡುವ ಕುಮ್ಭಕರ್ಣನಂತೆ
ಆಗೊಮ್ಮೆ ಈಗೊಮ್ಮೆ  ಎದ್ದು ಬರುವೆ
ನನ್ನವರವರಿವರು   ಕಾಲನೊಳಗೆ ಲೀನವಾದಾಗ

Comments

Popular posts from this blog

ಜಾರಬೇಡ ನಾರಿ

ನಿದ್ರೆ ಬಾರದ ದಿನಗಳು