Posts

Showing posts from September, 2015

ದುಂಡುಹೊಟ್ಟೆ ತುಂಟ

ದುಂಡು ಹೊಟ್ಟೆ ತುಂಟನದು  ಇಲಿಯ ಜಂಬೂ ಸವಾರಿ  ಮುರಿದ ಹಲ್ಲು ಆನೆ ಮುಖ  ಇವನ ಸ್ಟಂಟು ನೋಡಿರಿ  ವರ್ಷ ವರ್ಷ ಬರುವನಿವನ  ಭಿನ್ನ ಭಿನ್ನ ಮಾದರಿ  ಗಾಂಧಿ ಗಣಪ , ನೆಹರು ಗಣಪ  ಇಂದು ಮೋದಿಗೂನು ಸೊಂಡಲಿ  ಗೂಟ ನೆಟ್ಟು ಪೆಂಡಾಲಾಕಿ ಕಟ್ಟೆಮೇಲೆ ಗಣಪನು  ನಲಿವ ಕುಣಿವ ಪಡ್ಡೆಗಳ  ರಾಜ್ಯಕಿವನೇ ರಾಜನು  ಕೆಂಪುಪಟ್ಟಿ ಹಣೆಯ ಮೇಲೆ  ಕಪ್ಪಾಯಿತು ಕುಣಿಯುತ  ಗಣೇಶಪಟ್ಟಿ ಜೇಬು ತುಂಬಿ  ಹೊಟ್ಟೆ ಪಾನಾವ್ರುತ  ಮನೆಗಳಲ್ಲಿ ಪುಟ್ಟ ಗಣಪ  ಮಕ್ಕಳಿಗೆ "ಬಾಲಗಣೇಶ್" ಎಲ್ಲರೊಡನೆ ಫೈಟು ಮಾಡಿ  ಗೆದ್ದು ಬರುವ ನಾಟಿ ಗಣೇಶ್  ಬಿದ್ದು ನಗಿಸಿ , ಎದ್ದು ನಗುವ  ಪಾರ್ವತಿಯ ಕಂದನು  ಮೂರೇ ಕ್ಷಣದಿ ಮೂರು ಲೋಕ  ಸುತ್ತುವ ಪ್ರಚಂಡನು  ಬರಮಾಡಿರಿ ಒಡಗೂಡಿರಿ ಈ ಚೌತಿ ಗಣೇಶನ  ಜೈ ಎನ್ನಿರಿ ಹರಸೆನ್ನಿರಿ  ನಮ್ಮ ಗಣಪತಿಬಪ್ಪನ  ನಮ್ಮ ಗಣಪತಿಬಪ್ಪನ     ( ಶ್ರೀನಿವಾಸ ಮಹೇಂದ್ರಕರ್)  ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು  ಶ್ರೀಕಸ್ತೂರಿನಿವಾಸ ಮತ್ತು ಹೃಶೀಕ್ 

ಎಂದೂ ಬರದವಳಂತೆ

ಎಂದೂ ಬರದವಳಂತೆ ಬೀಸಿ ಹೋದವಳೇ  ಬೆಟ್ಟದ ಮರೆಯಿಂದ ಇಣುಕುವೇಯೇಕೆ  ಸಂಜೆಗತ್ತಲ ನೆನೆದು ಬೆದರಿ ನಡೆದವಳೇ  ಬೆರಗು ಕದಿಯುವ ಬಯಕೆ ಮತ್ತೆ ನಿನಗೇಕೆ  ತುಂಬಿರುವ ಚಂದಿರನ ಮಡಿಲಲ್ಲಿ ಮಗುನಿದ್ದೆ  ಕೆಡಹುವ ಹುನ್ನಾರ ಮಾಡುತಿರುವೆ  ಮನೆಯ ದೀವಿಗೆ , ಮಿನುಗು ತಾರೆಗಳು  ಬೆಳಕ ಸಾಮ್ರಾಜ್ಯವಿದು ನೀ ಗಡೀಪಾರಾಗಿರುವೆ  ನಿಂತ ಮಳೆಯನು ತೊರೆದ ಮಾರುತವು ನೀನು  ಮುಂದಿನೂರಲೇ ಕರಗಿ ಸುರಿಯಬೇಕು  ನಿನ್ನರಸುವಂಗಳದಿ ಹಂಗು ಬಿಂಕವಬಿಟ್ಟು  ಸಿಹಿಹಸಿರ ಸುಗ್ಗಿಖುಷಿ ಬೆಳೆಸಬೇಕು  ಬದುಕ ಶಾಲೆಯ ನುರಿತ ಹೈಕಳು ನಾವು  ಬಂದದ್ದು ಹಿಡಿದದ್ದು ನಮ್ಮದೇನೆ  ಹೊಸತು ಹುಡುಕುವ ಕಣ್ಣು ನಮ್ಮೊಳಗೇ ಇರುವಾಗ  ಪ್ರತಿ ದಿನದ ಪ್ರತೀ ಕ್ಷಣವೂ ಬೆರಗುತಾನೆ ?                                              ಶ್ರೀನಿವಾಸ ಮಹೇಂದ್ರಕರ್