Posts

Showing posts from 2011

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ

ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ ತಿಳಿಯೋದ್ ಹ್ಯಾಂಗ್ ನಿನ್ನ್ ಧಾಟಿ ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ ತಿರುಗಿಸ್ತಿ ನಿನ್ ರಾಟಿ. ಒಳಗಿದ್ದಾಗ್ ನಾನಿಂಗಿರ್ಲಿಲ್ಲ ಲೋಕದ್ ಬ್ಯಾನಿ ತಿಳಿದಿರ್ಲಿಲ್ಲ ನಂಪಾಡ್ಗ್ ನಾನ್ ಆಡ್ಕೊಂಡಿದ್ದೆ ಬ್ಯಾಡ್ ಬ್ಯಾಡ್ ಅಂದ್ರು ಹಾಕ್ಕೊಂಡ್ ದಬ್ಡಿ ಕೇಳಿದ್ನಾ ನಿಂಗ್ ನಾ ಬಡ್ತಿ . ಕೇಳಿದ್ನಾ ನಿಂಗ್ ನಾ ಬಡ್ತಿ . ನೀನ್ ಅಂದ್ಕೊಂಡ್ ಅಂದ್ಕೊಂಡ್ ಬಣ್ಣ ತೋರ್ಸಿ ಅಂದ್ಕೊಂಡ್ ಜಾಗ್ದಾಗ್ ಬುದ್ದಿ ಬೆಳ್ಸಿ ಒಳ್ಳೆವ್ರ್ ಕೆಟ್ಟೋವ್ರ್ ಮಾಡ್ತಿ ಬ್ಯಾಡ್ ಬ್ಯಾಡ್ ಅಂದ್ರು ದೊಡ್ದೊರಾದ್ವಿ ಕೇಳಿದ್ವಾ ನಿಂಗ್ ನಾವ್ ಬಡ್ತಿ ? ಕೇಳಿದ್ವಾ ನಿಂಗ್ ನಾವ್ ಬಡ್ತಿ ? ಹಾರ್ತೀನಂದ್ರೆ ಗಾಳಿ ಕೊಟ್ಟಿ ಈಜ್ತೀನಂದ್ರೆ    ನೀರ್ ಕೊಟ್ಟಿ ಕಷ್ಟ ಸುಖದ್ ಜೀವನ್ದಾಗೆ ಎಂಥೆಲ್ಲ ಸೊಗ್ಸ ನೀನಿಟ್ಟಿ ಗಂಡ ಹೆಂಡ್ತಿ ಮಕ್ಕಳ್ ಮರಿ ಸೊಗಸಾದ್ ಗಂಟನ್ ಕಟ್ಟಿ ಸೊಗಸಾದ್ ಗಂಟನ್ ಕಟ್ಟಿ ಬ್ಯಾಡ್ ಬ್ಯಾಡ್ ಅಂದ್ರು ಕಟ್ಬಿಚ್ತೀಯ ಎಲ್ರು ಮನಸನ್ ನೋಯ್ಸಿ ಕಾಣದ್ ಊರ್ಗೆ ವರ್ಗ ಮಾಡ್ತಿ ಉಳಿದೋರ್ ಕಣ್ಗಳ್ ತೊಯ್ಸಿ . ಉಳಿದೋರ್ ಕಣ್ಗಳ್ ತೊಯ್ಸಿ . ಬ್ಯಾಡ್ ಬ್ಯಾಡ್ ಅಂದ್ರು ಬಡ್ತಿ ಕೊಡ್ತಿ ತಿಳಿಯೋದ್ ಹ್ಯಾಂಗ್ ನಿನ್ನ್ ಧಾಟಿ ಏನ್ ಮಾಡ್ಲಿ ಬಿಡ್ಲಿ ಸತ್ತಂಗ್ ಮಲಗ್ಲಿ ತಿರುಗಿಸ್ತಿ ನಿನ್ ರಾಟಿ.

ನೆರೆಯೂರ ಅಂಗಳದಿ

ನೆರೆಯೂರ ಅಂಗಳದಿ ಇರುಳೆಲ್ಲ ನೀ ಕಳೆದು ಸಂಗಾತಿ ತೋಳಿನಲಿ ಪ್ರತಿಘಳಿಗೆ ನೀ ನಲಿದು ಕರ್ತವ್ಯ ಕೂಗಿದೆಯೆಂದು ಓಡೋಡಿ ಬಂದಿರುವೆ ಅವಳ ತುಟಿಯಂಚಿನ ಬಣ್ಣ ನಿನ್ನ ಮೊಗದಿಂದ ಇನ್ನು ಕಳಚಿಲ್ಲವಲ್ಲ? ಅದೆಷ್ಟು ಕಾಟವಿತ್ತೆಯೋ ಅವಳಿಗೆ , ಹಿಂಡಿದ ಕಿವಿಗಳ ಕೆಂಪು ಮಾಯವಾಗಿಯೇ ಇಲ್ಲ ಅರೆಕ್ಷಣವಾದರೂ ನಿದ್ದೆ ಮಾಡಬಾರದೆ ? ಕಣ್ಣು ಕೆಂಪಾಗಿ ಮೊಗವು ಊದಿದೆಯಲ್ಲ ? ಆಚೀಚೆಯ ಹಕ್ಕಿಗಳು ನಿನ್ನ ಮೊಗವ ಕಂಡು ನಕ್ಕು ಅನಕಿಸುತಿಹವು ನಮ್ಮೊರನದಿ ಕನ್ನಡಿ ಹಿಡಿದಿದೆ, ಅಯ್ಯೋ ಮತ್ತಷ್ಟು ನಾಚಿ ಕೆಂಪಾದೆಯ? ಅಂಜಿಕೆಯಿಂದ ನೀನೆಷ್ಟು ಮೋಡಗಳೊಳಗೆ ಮರೆಯಾದರೂ ಆ ನಿನ್ನಾಟ ಊರೆಲ್ಲ ಸುದ್ದಿಯಾಗಿದೆ ನಿನ್ನ ನೋಡಲೆಂದೇ ಅದೆಷ್ಟು ಜನ ನದಿ ತೀರದಲ್ಲಿ ಕಾದಿಹರು.

ಗುನುಗು ಹಾಡಾಗೊ ಹಾದಿಯಲಿ

ಗುನುಗು ಹಾಡಾಗೊ ಹಾದಿಯಲಿ ನಡೆದೇ ನಾ ನಿನ್ನ ನೆನಪಲ್ಲಿ ಅರಿಯುವಾ ಆಸೆ ಮನದಲ್ಲಿ ಸನಿಹಕೆ ಹೇಗೆ ನಾಬರಲಿ ನಿಶೆಯ ಸಹವಾಸ ನಿನಗೇಕೆ ? ಶಶಿಯ ಆ ಅಂದ ಸವಿಯೋಕೆ ಬೆಂಕಿಯಾ ಸನಿಹವು ಬೇಕೇನು ? ಕೆಂಪಿರದೆ ಕಾಮನಬಿಲ್ಲೇನು ಮುೞಿದೆ ನನ್ನ ಹಾದಿಯಲಿ !! ನೋಡು ಆ ಹೂವ ನಗುವಲ್ಲಿ ಭಾದಿಸದೆ ಬಿಡದು ಈ ಭ್ರಮೆಯೂ !! ಕನಸಿರದೆ ಭ್ರಮಿಸಿದೆಯಾ ಭುವಿಯು ಕಾಣದೆನೋ.... ಕೊನೆಯೂ ? ಅಂತ್ಯವಿರದಾ ಈ ನಡೆಯು ಹಗಲು ಕಂಡಾ ಭಾವಿಯಿದು !! ಈಜಿ ಗೆಲುವಾ ಧೈರ್ಯವಿದು ನೀತಿನಿಯಮಾ ಮೀರುವೆಯಾ ? ಮಾಡಿದವ ಸಿಕ್ಕರೆ ಕಳಿಸುವೆಯಾ ಗುನುಗು ಹಾಡಾಗೊ ಹಾದಿಯಲಿ ನಡೆದೇ ನಾ ನಿನ್ನ ನೆನಪಲ್ಲಿ ಅರಿಯುವಾ ಆಸೆ ಮನದಲ್ಲಿ ಸನಿಹಕೆ ಹೇಗೆ ನಾಬರಲಿ ಕಲಿಗಳೋತ್ತಮರು ಮುಂದಿಹರು! ಸೋಲಿಸಲು ಹವಣಿಸಿ ಕಾದಿಹರು ?? ಹಟವಿರದೆಯುತ್ತಮರಾಗಿಹರೆ ? ಸೋಲಲಂಜುವರು ಉತ್ತಮರೆ ? ಕನಸಿಗೆ ಜೀವನ ಬಲಿಯೇಕೆ ? ಕನಸಿರದ ಬದುಕೊಂದು ಬೇಕೇ ದಾಟಿದವನೇ ಎಲ್ಲೆಗಳ , ಅಪ್ಪುಬಾ ನನ್ನ ಬಾಹುಗಳ. ಧೈರ್ಯವಿರದೆ ಶಾಂತಿಯಿರದು. ಶಾಂತಿಯೇ ಮುಕ್ತಿಯ ಹಾದಿಯದು. ಗುನುಗು ಹಾಡಾಗೊ ಹಾದಿಯಲಿ ನಡೆದೇ ನಾ ನಿನ್ನ ನೆನಪಲ್ಲಿ ಅರಿಯುವಾ ಆಸೆ ಮನದಲ್ಲಿ ಸನಿಹಕೆ ಹೇಗೆ ನಾಬರಲಿ

ಬೆಳಕೇ ಇಲ್ಲದ ಬಾಂದಳದಲ್ಲಿ

ಚಂದಿರ ವಂಚಿತ ತಾರೆಗಳು ಅವ ಕ್ಷೀಣಿಸೋ ಘಳಿಗೆಗೆ ಕಾದಿಹವು ಬೆಳಕೇ ಇಲ್ಲದ  ಬಾಂದಳದಲ್ಲಿ ಬೀಗುವ ಕನಸನು ನೋಡಿಹವು ಕನಸು ನನಸಾಗುವ ಈ ದಿನದಂದು ಏಕೆ ಕಾಡಿದೆ ನಿಮ್ಮ, ಮಾತ್ಸರ್ಯದ  ಛಾಯೆ? ಬೆಳಕಿನೂರ ದೀಪಗಳು ಬೆಳಗುವ ಪರಿಯು ನಿಮ್ಮಲ್ಲಿ  ಈರ್ಷೆಯಾ  ಮನೆ ಕಟ್ಟಿದೆಯೇ ? ಮನೆಯಾಚೆ ತೂಗಿರುವ ಆಕಾಶಬುಟ್ಟಿಗಳು ಚಿಣ್ಣರ ಕೈಯಲ್ಲಿ ಚಿನಕುರಳಿಗಳು ಬೆಳಕ ಹೂವು ಆಗಸಕ್ಕೆ ಚಿಮ್ಮುವ ಮಸಿಕುಡಿಕೆಗಳು ನಿಮ್ಮ ಕಡೆ ಸುಯ್ಯ್ ಎಂದು ಧಾವಿಸುತ್ತಿರುವ ಬಣ್ಣದ ರಾಕೆಟ್ಟುಗಳು ಎಲ್ಲವೂ ನಿಮ್ಮ ಬೆಳಗುವ, ಹೊಳೆಯುವ ಮೊಗಗಳಿಗೆ ಸಾಟಿಯಾದಾವೆಂಬ ಹಳಹಳಿಯೋ ನಿಮಗೆ? ಮನೆಯ ಅಂಗಳದಲ್ಲಿ , ರಂಗವಲ್ಲಿಯ ಸಾಲುಗಳಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿರುವ ದೀಪಗಳು ನಿಮ್ಮ ಪುಂಜಗಳ ಮನಮೋಹಕ ಆಕೃತಿಯ ವಿಜ್ರಂಭಣೆಯನ್ನು ನೀರಸ ಗೊಳಿಸಾವೆಂಬ ಆತಂಕವೇ ನಿಮಗೆ ? ಎಲ್ಲಕಡೆಯಿಂದಲೂ ಬೂಮಿಯ ಬೆಳಗುತ್ತಿರುವ ನಿಮಗೆ ಇಂದು ದೀಪಾವಳಿ ಎಂಬುದು ಮರೆತು ಹೋಯಿತೇ ? ಮನಸಿನ ಬೆಳಕು, ಕನಸಿನ ಬೆಳಕು , ದೀಪದ ಬೆಳಕಿನೊಟ್ಟಿಗೆ ಸೇರಿ ನಿಮ್ಮ ಕಡೆ ನಗು ಮುಖಮಾಡಿ, ವರುಷವೆಲ್ಲ ಹರುಷತರುವ, ನಿಮ್ಮೆಲ್ಲರಿಗೆ  ಕೃತಜ್ಞತೆಯೀವ ಪರಿಯಷ್ಟೇ ಈ ಬೆಳಕಿನ ಹಬ್ಬ . ಶುಭಾಶಯಗಳು ನಿಮಗೆ ಈ ಬೆಳಕಿನಾಹಬ್ಬಕೆ ಶುಭಾಶಯಗಳು ನಿಮಗೆ ಈ ಬೆಳಕಿನಾಹಬ್ಬಕೆ ಧನ್ಯವಾದಗಳು  ಶ್ರೀನಿವಾಸ ಮಹೇಂದ್ರಕ

Anna Hazare -1

ತಿಳಿದೋ ತಿಳಿಯದೆಯೋ ಕೆರಳಿಯೋ ಅಸಹಾಯಕರಾಗಿಯೋ ಭ್ರಷ್ಟ ವ್ಯವಸ್ಥೆಗೆ ಮೈಗೂಡಿಕೊಂಡು ನಿರಾಶಾವಾದಿಗಳಾಗಿರುವ ಯುವಕರಿಗೆ ಬೆಳಕ ತೋರಿಸಬಂದನೇ ಈ ವಯೋವೃದ್ದ ? ನಿಜ ಸ್ವಾತಂತ್ರ್ಯದ ಸವಲತ್ತುಗಳೆಲ್ಲಾ ಭ್ರಷ್ಟರ ತಿಜೋರಿಯಲಿ ಭಂಧಿಯಾಗಿರಲು ಚೈತನ್ಯರಹಿತವಾಗಿರುವ ಯುವಕರ ತೋಳುಗಳಿಗೆ ಶಕ್ತಿಯಾಗಿ ನಿಂತನೇ ಈ ವಯೋವೃದ್ದ? ನಮ್ಮ ಅರಿವಿಗೆ ಬಾರದ ಕನಸ ಕಂಡನೆ ಇವನು? ನಮ್ಮ ಮನದ ತುಡಿತಗಳ ಅರೆತುಕೊಂಡನೆ ಇವನು? ದಶಕ ದಶಕಗಳ ಶಾಪ ತೊಡೆದು ಶಕ್ತಿಯಕೊಡಲು ತನ್ನ ದೇಹಕೆ ದಂಡ ನಗುನಗುತ ನೀಡಿಹನು ಹೀಗೆ ಅಲ್ಲವೆ ನಾವು ಆಂಗ್ಲರ ಗುಲಾಮಗಿರಿ ಮಾಡಿದ್ದು ಹೀಗೆ ಅಲ್ಲವೆ ನಾವು ನಮ್ಮ ತನವ ಮರೆತದ್ದು ? ಹೀಗೆ ಅಲ್ಲವೆ ಗಾಂಧಿ ಸ್ವಾತಂತ್ರ್ಯದ ಬಾಗಿಲು ತೆರೆದದ್ದು ? ಹೀಗೆ ಅಲ್ಲವೆ ಪರಿವರ್ತನೆಗೆ ನಾಂದಿ ಆದದ್ದು ? ಸ್ವಾತಂತ್ರ್ಯ ವೀರನಾಗುವ ಸದವಕಾಶವಿದುವೆ ಪ್ರಗತಿಶೀಲ ಭಾರತದ ಸದ್ಭವಿಷ್ಯಕ್ಕೆ ದಾರಿ ಇದುವೆ ಬನ್ನಿ ಓಗೊಡುವ ಅನ್ನ ಹಜಾರೆಯ ಕರೆಗೆ ಮುಡಿಪಿಡುವ ಕೆಲಸಮಯ ಜನ್ಮಭೂಮಿಗೆ

ಹೋಳಿ ಅಲ್ಲವೇನು

ಹೋಳಿ ಅಲ್ಲವೇನು ಹೂವಿಗೊಂದು ಬಣ್ಣ , ಎಲೆಗೂ ಒಂದು ಬಣ್ಣ ಕೂಡಿ ಬದುಕುವ ಬಾಳಲ್ಲಿ ಸಂಭಂದಗಳದು ಹತ್ತು ಹಲವು ಬಣ್ಣ ಕಳೆವ ಘಳಿಗೆಯಲ್ಲ ಹೊಳಿಯಲ್ಲವೇನು ? ಬೆಳ್ಳಿ ಬೆಳಕ ಕಿರಣ , ನೋಡೆ ಬಿಳಿಯ ಬಣ್ಣ ಮಳೆಯ ಹನಿಗೆ ಚದುರಿದೋಡೇ , ನೋಡು ಏಳು ಬಣ್ಣ ಹಲವು ಭಾವನೆಗಳ ಹೊಮ್ಮಿಸುವ ಮನಸ್ಸಿನಲ್ಲಿ ದಿನವೂ ಹೊಳಿಯಲ್ಲವೇನು ? ಆಕಾಶ ನೀಲಿ ಬಣ್ಣ, ರವಿಯು ಚೆಲ್ಲಿ ಕೆಂಪು ಬಣ್ಣ ತೇಲಿ ನಡೆವ ಮೋಡಗಳದು ಚಿತ್ರ ವಿಚಿತ್ರ ಬಣ್ಣ ಕನಸ ರಂಗು ಚೆಲ್ಲಿ, ಹಸನು ಬದುಕ ಚಿತ್ರ ಬರೆದು ನಡೆದು ಸಾಗಿಹೆವವು ನಾವು ಇದು ಹೊಳಿಯಲ್ಲವೇನು? ಕಮಲ ಕೆಂಪು ಬಣ್ಣ , ಕೆಳಗೆ ಕೆಸರು ಕೊಚ್ಚೆಬಣ್ಣ ನೋವು ನಲಿವ ಪಯಣವಿದು ಹೊಳಿಯಲ್ಲವೇನು ? ಗಾಳಿಗಾವ ಬಣ್ಣ ? ಹರಿವ ನೀರಿಗಾವ ಬಣ್ಣ? ಕಾಣದೇನೆ ಜೀವನಾಡಿ ಇದು ಹೊಳಿಯಲ್ಲವೇನು ?                                                   ಶ್ರೀನಿವಾಸ ಮಹೇಂದ್ರಕರ್                                                   http://www.srinivasapoems.blogspot.com/                               

ಉಪಮೇಯವೆಲ್ಲಿದೆ ?

ಕಾಣದ ಒಡಲ ನಡುಕಗಳು ದೈತ್ಯ ಸುನಾಮಿಯಾಗಿರಲು ಉಪಮೇಯವೆಲ್ಲಿದೆ ಭೂಮಿ ನಿನ್ನ ಉದ್ವೇಗಕೆ? ನೀ ಜನ್ಮವಿತ್ತ ಮನುಕುಲ ಬಲಿಯಾಗುತಿರಲು ನಿನ್ನ ನರ್ತನಕೆ ಉಪಮೇಯವೆಲ್ಲಿದೆ  ಭೂಮಿ ನಿನ್ನ ಕ್ರೌರ್ಯಕೆ ? ಕನಸುಗಳ ಹುಟ್ಟಿಸಿ, ಅರಮನೆಯ ಕಟ್ಟಿಸಿ ಜೀವರಾಶಿಗಳನೆಲ್ಲ  ಕೊಚ್ಚಿಕೊಲ್ಲುವುದೇಕೆ ಉಪಮೇಯವೆಲ್ಲಿದೆ  ಭೂಮಿ ನಿನ್ನ ಹುಚ್ಚಾಟಕೆ? ಸಾವಿರ ಸುನಾಮಿಗಳ ಎದುರಿಸಿನಿಂದು ಮುಂದಿನ ಬದುಕಿನ ಕನಸ ಹಿಡಿದು ಸಾಗುತಲಿದೆ ಜೀವರಾಶಿ ಉಪಮೇಯವೆಲ್ಲಿದೆ  ಅದರ ಆಶಾವಾದಕೆ ? ಕನಸಿಲ್ಲದ ಬದುಕು ಬದುಕೇ ಎಂದುಬರೆದ ನಿಸಾರಹ್ಮದ್ ಸಾಲುಮಾತ್ರ ಕಾಡುತಿಹುದು ಉಪಮೇಯವೆಲ್ಲಿದೆ  ಅದರ ದೂರದೃಷ್ಟಿಗೆ ?                                                                                    ಶ್ರೀನಿವಾಸ ಮಹೆಂದ್ರಕರ್

ಸಂಕ್ರಾಂತಿ 2011

ಧನುವಿನಿಂದ ಮಕರದೊಳಗೆ ನಡೆದ ಸೂರ್ಯನು ಧರೆಯ ಛಳಿಯ ನೀಗಿಸಲು ಯಾತ್ರೆ ಹೊರಟನು ಉತ್ತರಾಯಣದ ಪ್ರಖರ ಬೆಳಕ ಉಡುಗೊರೆ ಹೆಚ್ಚು ಹಗಲು ಹೆಚ್ಚು ಬೆಳಕು ಹೊಳೆವುದೀಧರೆ ಗದ್ದೆಯಲ್ಲಿ ರಾಶಿ ಹಾಕಿ ಕುಣಿದು ನಲಿಯುವ ಎಳ್ಳು ಬೆಲ್ಲ ಮೆದ್ದು ಮನದ ಪಿತ್ತ ಕಳೆಯುವ ನದಿಯ ದಡದಿ ನೆಂಟರೊಡನೆ ಊಟ ಅಧ್ಭುತ ವಸಂತನನ್ನು ಕರೆವ ಒಳ್ಳೆ ಮಾತನಾಡುತ ಬೆಳೆವ ರೈತ ಒಳ್ಳೆ ಬೆಲೆಯ ಪಡೆದು ನಲಿಯಲಿ ಪ್ರವಾಹ ಕಂಡ ಜನತೆ ಹೊಸತು ಬದುಕು ಕಾಣಲಿ ಸಂಕ್ರಾಂತಿ ಎಲ್ಲರಲ್ಲಿ ಶಾಂತಿ ಹಂಚಲಿ ಸಂಕ್ರಾಂತಿ ಶುಭಾಶಯಗಳು ಶ್ರೀನಿವಾಸ ಮಹೇಂದ್ರಕರ್