Posts

Showing posts from 2010

ನಿದ್ರೆ ಬಾರದ ದಿನಗಳು

ಎದೆಯ ಬಡಿತವ ಕಹಳೆಯಾಗಿಸಿ ಮನದ ಕಡಲಲಿ ಅಲೆಗಳೆಬ್ಬಿಸಿ ಕ್ಷಣಿಕವಾದರು ಬುದ್ದಿ ಮರೆಯದ ಹತ್ತು ಹಲವು ಕ್ಷಣಗಳು ಬಂದುಹೋದವು ಹುಟ್ಟಿನಿಂದಲಿ ನಿದ್ರೆ ಬರದಾ ದಿನಗಳು ಆ ನಿದ್ರೆ ಬಾರದ ದಿನಗಳು ಮಾತು ಬಾರದ ಮೂಕ ಮನಸದು ಕಣ್ಣ ತೆರೆದು ಜಗಕೆ ಬರುವುದು ಜಗದ ಗದ್ದಲ ದೊಳಗೆ ಬೆರೆತು ಅದೇ ಮಾತೆಂದು ತಿಳಿವುದು ತಿಳಿವು ಬಲಿತು ಅರಿವು ಮೂಡದೆ ಅರ್ಧ ನಿದ್ರೆಯ ಮರೆವುದು ಮಾತು ಕಲಿತ ಮರುಘಳಿಗೆಯೆ ಅರಿವು ಗಳಿಸುವ ಕಾಯಕ ಹಲವು ಶಕೆಗಳು ಕಳೆವವಲ್ಲಿ ಜೀವನ ಬಲು ರೋಚಕ ಮೊದಲ ಸ್ನೇಹ , ಮೊದಲ ಪ್ರೀತಿ ಹಲವು ಮೊದಲುಗಳಲ್ಲಿಯೇ ಮೊದಲು ಮೊದಲೇ ಅರಿವು ಮೂಡುವ ಮೊದಲೇ ಮಸುಕು ನಿದ್ರೆಯೇ ಮೊದಲೇ ಮಸುಕು ನಿದ್ರೆಯೇ ವಿಙ್ನಾನ ವೆಂಬುದು ಙ್ನಾನಕಲ್ಲ ಹಣವ ಗಳಿಸುವ ಮಾಧ್ಯಮ ಕಾಸು ಹೆಸರಿನ ಹಿಂದೆ ಸ್ಪರ್ಧೆಯು ಮರೆಯಾದುದಲ್ಲಿ ಸಂಯಮ ಅರೆತುದೆಲ್ಲಾ ಕಲೆತುದೆಲ್ಲಾ ವೃತ್ತ ಮಧ್ಯೆಯ ಬಿಂದುವು ಬಿಂದು ಬೆಳೆದು ದೊಡ್ಡದಾದರು ನಿದ್ರೆ ಕಾಣದೆ   ಶೂನ್ಯವು ಹೆತ್ತ ತಾಯಿಯ ಒಡಲಿನಲ್ಲಿ ಅದೇನು ಘಾಢ ನಿದ್ದೆಯೋ ಅದೇನು ಘಾಢ ನಿದ್ದೆಯೋ ಅದು ನಿದ್ದೆಅರಿಯದ ಬೊಂಬೆಯೋ ಗರ್ಭದಾಚೆಯ ಜಗವನೋಡುವ ಮೊದಲು ಜೀವದ ಮಾಯೆಯೋ                     ಶ್ರೀನಿವಾಸ ಮಹೆಂದ್ರಕರ್

ದೀಪಾವಳಿ ಶುಭಾಶಯಗಳು

ಹಗಲು ಜಾರುವ ಮುನ್ನ ಇರುಳು ಇಳಿಯುವ ಮುನ್ನ ಒಮ್ಮೆಯಾದರು ನೀ ಹಕ್ಕಿಯಂದದಿ ಹಾರು ಮನವು ಕಂಡರಿಯದ  ಈ ಜಗಸೋಬಗ ತೋರು  ಮೋಡ ಕಳಚುವ ಮುನ್ನ ಮಳೆಯೂ ನಿಲ್ಲುವ ಮುನ್ನ ಹನಿಯ ಸ್ಪರ್ಶಕೆ ಒಮ್ಮೆ ಮೈಯೊಡ್ಡಿನೋಡು ಕೊರಳಲ್ಲಿ ಚಳಿ  ಇಳಿಯೇ  ಮೈದುಂಬಿ ಹಾಡು  ನೋಟ ಮರೆಯುವ ಮುನ್ನ ಪರಧೆ ಕಳಚುವ ಮುನ್ನ ಬದುಕಿನಾ ಚಿತ್ತಾರ ನಿತ್ಯೋತ್ಸಾಹದಿ ನೋಡು  ಮಳೆಬಿಲ್ಲಿನೋಳಗೊಮ್ಮೆ  ಕಟ್ಟು ಕನಸಿನ ಗೂಡು ಗಾಳಿ ಬಿರುಸಾಗುವ ಮುನ್ನ ಸೂತ್ರ ಹರಿಯುವ ಮುನ್ನ ಚಿನ್ನರಾ ಮೊಗದೊಳಗೆ ಮುಗುಳುನಗೆ ತೋರು ನಗುತ ನಗಿಸುವ ಬಗೆಯ ಈ ಜಗಕೆ ಸಾರು ದೀಪಗಳ ಹಬ್ಬ ಬಂದು ಹೋಗುವ ಮುನ್ನ ಹಣತೆಯ ಬೆಳಕು ಮುಸುಕಾಗುವಾ ಮುನ್ನ  ಆಳದ ಮೌಡ್ಯಗಳ ಎಣ್ಣೆಯಾಮಾಡು ಉತ್ಸಾಹ ದೀವಿಗೆಯ ದಿನಬೆಳಗಿ ನೋಡು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ನಿನ್ನ ಪಾಲು :

Note : This poem is the thematic translation of Briyan Adems song "Do it for you" ಕಣ್ಣೊಳಗೆ ಕಣ್ಣಿಟ್ಟು ಒಮ್ಮೆ ನೋಡೆನ್ನ ಗೆಳತಿ ಕಾಣದಿರದು ನಿನ್ನ ಒಲವ ಬೆಲೆಯು ನಿನ್ನಂತರಾಳವಾ ಹುಡುಕಾಡು ಗೆಳತಿ ನನ್ನ ಕಂಡಘಳಿಗೆ ಹುಡುಕು ಕಾಣೆಯಾಗದಿರದು ಈ ಹುಡುಕಾಟ ಅರ್ಥಹೀನವೆನ್ನದಿರು ನಿನಗಾಗಿ ಸಾಯುವ ಗರಿಮೆಯ ತೆಗಳದಿರು ಎಂದೆಂದೂ ನೀನಿದ ಮರೆಯದಿರು ನನ್ನ ಪ್ರತಿಕೃತಿಯೂ ನಿನ್ನ ಪಾಲು ನಿನ್ನೆದೆಯೊಳಗೊಮ್ಮೆ ಕಣ್ಣ ಹಾಯಿಸಿ ನೋಡು ಕಾಣದಿರದು ನನ್ನ ಮುಗ್ಧ ಒಲವು ನನ್ನ ಜೀವವ ನೀ ದೇಣಿಗೆಗೆ ಕೇಳು ಸಂತಸದಿ ಕೊಡುವೆ ನನ್ನ ಪ್ರಾಣವನು ನಿನಗಾಗಿ ಹೊಡೆದಾಟ ವ್ಯರ್ಥವೇನೂ ಅಲ್ಲ ನೀನಿರದ ಬದುಕಲ್ಲಿ ದಾರಿಏ ಇಲ್ಲ ನಿನ್ನೊಲವಿಗಾಗಿ ಒಂಟಿ ಹಗ್ಗದ ನಡುಗೆ ನಿನ್ನೊಲುಮೆಗಾಗಿ ಮುಗಿಯದಾ ಈಹಗೆ ಈ ಹುಡುಕಾಟ ಅರ್ಥಹೀನವೆನ್ನದಿರು ನಿನಗಾಗಿ ಸಾಯುವ ಗರಿಮೆಯ ತೆಗಳದಿರು ಎಂದೆಂದೂ ನೀನಿದ ಮರೆಯದಿರು ನನ್ನ ಪ್ರತಿಕೃತಿಯೂ ನಿನ್ನ ಪಾಲು ಶ್ರೀನಿವಾಸ ಮಹೇಂದ್ರಕರ್

ಯುಗಾದಿ 2010

ಬೀಸುಕಲ್ಲಿನ ಸದ್ದು, ಹುರಿಗಡಲೆಯ ಘಮ ಘಮ ಎರೆಡೂ ಸೇರಿದ ದಿನವೇ ನನ್ನ ಬಾಲ್ಯದಾ ಯುಗಾದಿ ಶ್ಯಾವಿಗೆ ಹಾಲಿನ ನಡುವೆ ಬೇವಿನ ಪುಡಿ ಸಕ್ಕರೆ ತಟ್ಟೆಗೆ ಜಾರಿದ ದಿನವೇ ನನ್ನ ಬಾಲ್ಯದಾ ಯುಗಾದಿ ಕಣ್ಣು ಮಂಜಿರುವವರಿಗೆ, ಕಾಣದಾ ಚಂದ್ರನಾ ಬೆರೆಳಿಟ್ಟು ತೋರಿದ ದಿನವೇ ನನ್ನ ಬಾಲ್ಯದಾ ಯುಗಾದಿ ಬಣ್ಣದಾ ರೆಕ್ಕೆಯ ಹೊತ್ತ ಲಂಡಿ ಪಟಕೆ, ಆಕಾಶ ಪುಟ್ಟಿಯಾ ಕಟ್ಟಿ ಆಗಸದಿ ತೇಲಿಬಿಟ್ಟಾ ದಿನವೇ ನನ್ನ ಬಾಲ್ಯದಾ ಯುಗಾದಿ ಕೆಲಸಕ್ಕೆ ಬಾರದವರಾದರೂ, ಹಿರಿಯರಾದರೆ ಸಾಕು ಕಾಲು ಹಿಡಿದು ಹಣೆಗೊತ್ತಿದಾ ದಿನವೇ ನನ್ನ ಬಾಲ್ಯದಾ ಯುಗಾದಿ ಬೇವು ಬೆಲ್ಲವ ಹಂಚಿ, ಬೆಲ್ಲದಂತಿರಿಯೆಂದು ಸ್ನೇಹಿತರಿಗೆ ಹಾರೈಸಿದ ದಿನವೇ ನನ್ನ ಬಾಲ್ಯದಾ ಯುಗಾದಿ ಕಳೆದುಹೋದ ಬಾಲ್ಯವಾ ನೆನೆದು ಮತ್ತೆ ಬರಲಿ ಎಂದು ಕೊರಗುವ ಕವಿಗಳದಲ್ಲಾ ನನ್ನ ಹಾದಿ ಹಳೆಯ ನೆನಪು ಮೆಲಕುಹಾಕಿ, ಈಘಳಿಗೆಗೆ ದನಿಗೊಟ್ಟು ಬರೆದ ಈ ಹೊಸ ಕವನವೇ ಇಂದಿನ ನನ್ನ ಯುಗಾದಿ ಆದಿ ಅಂತ್ಯಗಳ ನಡುವೆ ಸಾಗಿರುವ ನಮ್ಮೆಲ್ಲರ ಬದುಕಿನಲಿ ಹೊಸತನವ ತರಲಿ ಈ ಯುಗಾದಿ.....ಈ ಯುಗಾದಿ..... ಪ್ರತಿ ಯುಗಾದಿ ಶ್ರೀನಿವಾಸ ಮಹೇಂದ್ರಕರ್

ಗುಂಗ್ ಊರಿನಾ ಒಡತಿ

ನನ್ನ ಕಣ್ಣ ನೋಟವನ್ನು ಮುಚ್ಚಿ ಮಂಜು ಮಾಡುತಿ ನಾ ನಡೆವಾ ಹಾದಿಯನ್ನು ಅದಲು ಬದಲು ಮಾಡುತಿ ಓ ಗುಂಗ್ ಊರಿನಾ ಒಡತಿ ನನ್ನೆದೆಯ ಮೇಲೇಕೆ ನಡಿತಿ? ನಾ ನೋಡುವಾ ಮುಖಗಳೆಲ್ಲದಲಿ ನಿನ್ನ ಬಿಂಬವಾ ಬರಿತಿ ಮಾತು ಮಾತಿನಾ ನಡುವೆ ನಿಂದು, ನನ್ನುಸಿರನೇಕೆ ನೀ ತಡಿತೀ? ಓ ಗುಂಗ್ ಊರಿನಾ ಒಡತಿ ನನ್ನೆದೆಯ ಮೇಲೇಕೆ ನಡಿತಿ? ದುಡಿದು ದಣಿದು ನನ್ನ ಕಣ್ಣು ಮುಚ್ಚಿರಲು ನಿದ್ದೆಯನೇಕೆ ಓಡಿಸುತಿ ಊಟ ತಿಂಡಿಯಾ ನಡುವಿನಲ್ಲಿ ನನ್ನ ಹೊಟ್ಟೆಯನೇಕೆ ತುಂಬಿಸುತಿ? ಓ ಗುಂಗ್ ಊರಿನಾ ಒಡತಿ ನನ್ನೆದೆಯ ಮೇಲೇಕೆ ನಡಿತಿ? ಚಂದಿರ ಮೊಗವಾ ನಿನ್ನದಾಗಿಸಿ ನನ್ನನಣುಕಿಸಿ ನಗುತೀ ಕೊರೆವ ಚಳಿಯಲೂ ನಿನ್ನ ನೆನಪಿನಾ ಬೆಂಕಿಯೊಳಗೆ ನನ್ನ ಸುಡುತೀ ಓ ಗುಂಗ್ ಊರಿನಾ ಒಡತಿ ನನ್ನೆದೆಯ ಮೇಲೇಕೆ ನಡಿತಿ? ನಾನೋದುವಾ ಪ್ರತಿ ಕಥೆಯಲೂ ವೇಶ ಮರೆಸಿ ನೀ ಬರುತೀ ನನ್ನ ಕವಿತೆ ಪ್ರತಿಸಾಲಿನಲ್ಲೂ ನಿನ್ನ ಹೆಸರನೇಕೆ ನೀ ಬರಿತೀ? ಓ ಗುಂಗ್ ಊರಿನಾ ಒಡತಿ ನನ್ನೆದೆಯ ಮೇಲೇಕೆ ನಡಿತಿ? ಶ್ರೀನಿವಾಸ ಮಹೇಂದ್ರಕರ್ 03/03/2010