ಎಲ್ಲಿ ಕಳೆದಿರುವೆ ಇತಿಹಾಸ ?

ಎಲ್ಲಿ ಕಳೆದಿರುವೆ ಇತಿಹಾಸ ?
ಕಾಲ ಚಕ್ರದ ಜೊತೆ ತಿರುಗಿ , ಭೂ ಒಡಲ  ಸೇರಿ 
ಸುಟ್ಟು  ಕಾರಕಲಾಗಿರುವ , ಪಳಿಯುಳಿಕೆಗಳಲ್ಲೋ ?
ಸಮುದ್ರಗಳ  ಘೋರ ದುರಂತಗಳಲ್ಲಿ ಮಡಿದ , ಜೀವಿಗಳ
ಎಲುಬುಗಳಿಂದಾದ  ಡೊವರ್ ನಂತಹಾ  ಬಿಳಿ ಬೆಟ್ಟಗಳಲ್ಲೋ ?
ಮರುಭೂಮಿಯ ನಿರಂತರತೆಯಲಿ  ನಿಂತ, ನೂರಾರು 
ಅಡಿ ಎತ್ತರಕ್ಕೆ ಚಾಚಿದ ನಿಗೂಢ ಪಿರಾಮಿಡ್ಡುಗಳಲ್ಲೋ?
ಮಹಾ ಸಾಗರದಡಿಯಲ್ಲಿ ಮೈಲುಗಟ್ಟಲೇ ಚಾಚಿರುವ 
ರಾಮಸೇತುವಿನಲ್ಲೋ ? ಎಲ್ಲಿ ಕಳೆದಿರುವೆ ಇತಿಹಾಸ ? 

ಐಸಿಸ್ ಉಗ್ರರ ಧಾಳಿಗೆ ಬಲಿಯಾದ , 
ಪಾಲ್ಮೀರಾ ದಂತಹ , ಐತಿಹಾಸಿಕ ನಗರಗಳಲ್ಲೋ ?
ಧಾಳಿಕೋರ ಪರ್ಷಿಯನ್ನರ ಕೆಂಗಣ್ಣಿಗೆ ಮುರಿದುಬಿದ್ದ ,
 ದೇವಾಲಯಗಳ   ಅವಶೇಷಗಳಲ್ಲೋ ?
ಈರ್ಷೆಗೆ ಬಲಿಯಾಗಿ , ಸುಟ್ಟು ಕರಕಲಾದ , ಪುರಾತನ 
ಗ್ರಂಥಗಳ , ಕಪ್ಪು  ಮೋಡಗಳಲ್ಲೋ ?
ಆಂಗ್ಲರು ದೋಚಿದ , ಅಮೂಲ್ಯ ರತ್ನ ಆಭರಣಗಳು  
ಅಡಗಿಸಿರುವ  ತಿಜೋರಿಗಳಲ್ಲೋ ? ಎಲ್ಲಿ ಕಳೆದಿರುವೇ ಇತಿಹಾಸ ? 

ಆಕ್ರಮಣಕಾರರ ರಾಜಕೀಯ ದಬ್ಬಾಳಿಕೆಯಲಿ ಮರೆಯಾದ 
ಸಮಾರಿಯನ್ ನಂತಹ ಭಾಷೆಗಳಲ್ಲೋ?  
ಗುಳೆಯೆದ್ದ ಜನಾಂಗಗಳ , ಬದುಕಿನಲಿ   
ಕಳೆದೋದ , ಸುಂದರ ಜಾನಪದ ಕಲೆಗಳಲ್ಲೋ ?
ತನ್ನ ಭಾಷೆ , ಸಂಸ್ಕೃತಿಗೆ ಕಿಂಚಿತ್ತೂ 
ಪ್ರೀತಿತೋರದ , ಕಲಿತ ಮೂರ್ಖರಲ್ಲೋ ? 
ಸಮನ್ವತೆಯ ಹೆಸರಿನಲ್ಲಿ , ಸತ್ಯ ತಿರುಚಿರುವ  
ಮಕ್ಕಳ ಪಠ್ಯ ಪುಸ್ತಕಗಳಲ್ಲೋ? ಎಲ್ಲಿ ಕಳೆದಿರುವೆ ಇತಿಹಾಸ ?

ಓಟಿಗಾಗಿ , ನೋಟಿಗಾಗಿ , ಅಪಪ್ರಚಾರಿಸುವ  
ರಾಜಕಾರಣಿಗಳ ಭಾಷಣಗಳಲ್ಲೋ 
ಟಿ ಆರ್ ಪಿ ಗಾಗಿ , ತಮ್ಮ ವೃತ್ತಿಯನ್ನೇ ಮಾರಿಕೊಳ್ಳುವ 
ಪತ್ರಕರ್ತರ ಬಿಸಿ ಬಿಸಿ  ಸುದ್ದಿಗಳಲ್ಲೋ 
ಜಗತ್ತಿನ ಕಣ್ಗೆ ಮಂಕುಬೂದಿ ಯರಚುವ 
ಸಾಮಾಜಿಕ ತಾಣಗಳ  ಕಪಟ  ಪೋಸ್ಟ್ಗಳಲ್ಲೋ 
ಇತಿಹಾಸದ ಪೆರ್ಮೆಯರಿಯದ ,  ಹೆಡ್ಡ ,
ಯುವಜನಾಂಗದ ಧೋರಣೆಗಳಲ್ಲೂ 
ಎಲ್ಲಿ ಕಳೆದಿರುವೆ ಇತಿಹಾಸ ?

ನಿನ್ನ ಕಂಡವರಾರೂ ಇಲ್ಲದಿರುವಾಗ 
ಇರುವವರು ನಿನ್ನ ಬಣ್ಣ ಬದಲಿಸುತ್ತಿರುವಾಗ 
ಹಾಡು ಹಗಲೇ , ನಿನ್ನ ಬೆತ್ತಲು ಮಾಡಿ , 
ಮಾನಭಂಗ ನಡೆಸುತ್ತಿರುವಾಗ 
ಹುದುಗದೇ , ಅಡಗಡೆ , ಓಡಿಹೋಗದೇ 
ಮತ್ತೇನು ಮಾಡುವೆ ನೀನಾದರೂ 
ಕೇಳೆನು ನಾ ನಿನ್ನ ಮತ್ತೊಮ್ಮೆ 
ನೀನೇಕೆ ಕಳೆದಿರುವೆ , ಎಲ್ಲಿ ಕಳೆದಿರುವೆ ಎಂದು . 

Comments

Popular posts from this blog

ಸ್ಮಶಾನ ವೈರಾಗ್ಯ

ಜಾರಬೇಡ ನಾರಿ

ನಿದ್ರೆ ಬಾರದ ದಿನಗಳು