ಮತ್ತೆ ಬಾರದ ದಿನಗಳು

ಮತ್ತೆ ಬಾರದ ದಿನಗಳೆಲ್ಲಾ ನೆನಪಿನೋಡಲಲಿ ಗೂಡು ಕಟ್ಟಿವೆ
ಹುಡುಗರಾಟದ   ಶುದ್ದಸುಂದರ ಘಳಿಗೆ ಘಳಿಗೆಯ ಹಿಡಿದಿವೆ

ಬೆಳಗಿನಿಂದ ಸಂಜೆವರೆಗೂ ಬೀದಿ ಸುತ್ತಿದ ದಿನಗಳು
ಗೆಳೆಯರೊಡನೆ ರಸ್ತೆ ಮದ್ಯೆ ಕ್ರಿಕೆಟ್ ಆಡಿದ ಕ್ಷಣಗಳು

ಅದೆಷ್ಟು ಸಾರಿ ಚಾಳಿ ಬಿಟ್ಟೆ  , ಅದೆಷ್ಟುಸಾರಿ ಹಿಡಿದೆನೋ
ಗೆಳೆಯ ನಂಜೊತೆ ಆಡದಿರಲು ಬಿದ್ದು ಬಿದ್ದು ಅತ್ತೇನೋ

ಮನೆಯ ಜಗುಲಿಯ ಮುಂದೆ ಮಲಗಿ  , ಕಂಡ ಸುಂದರ ಆಗಸ
ತೆರೆದ ಕಂಗಳ ನೂರು ಕನಸು , ನಿದ್ದೆ ಯತ್ನವು ನೀರಸ

ಅಪ್ಪ ಸಂಜೆ ತರುವ ತಿಂಡಿ ಸಾಲದಾಯಿತು ಹೊಟ್ಟೆಗೆ
ತಿಂದು ಸೀಪಿದ ನನ್ನ ಕೈಯು   ಜಾರಿತ್ತು ಅಮ್ಮನ ತಟ್ಟೆಗೆ

ಅದೇನು ಮಾಯೆಯೋ ತಾಯಿ ಮಡಿಲು , ತೊಡೆದು ಬಿಡುವುದು ಎಲ್ಲ ನೋವಾ
ಅಮ್ಮ ತಟ್ಟಲು ತಲೆಯ ಮೇಲೆ ಮರೆಯುತಿದ್ದೆ  ಲೋಕವಾ

ಅಜ್ಜಿಮನೆಯಾ ರಜೆಯ ದಿನಗಳು , ಅತ್ತೆ ಮಾವನ ಪಿರ್ಯಾದಿಗಳು
ಉಂಟೋ ಇಲ್ಲವೋ , ಕಷ್ಟ ಸುಖವೊ ಹಾರಾಡುವ ಈ  ಮೊಮ್ಮಕ್ಕಳು

ಎಂಥ ಚೆಂದವೋ ಸ್ವಚಂದದ , ಶುದ್ಧ ಬಾಲ್ಯದ ದಿನಗಳು
ಕಳೆದು ಹೋಗಿವೆ ಬೇಡಿ ಕರೆದರೂ ಬರವು ಆ ಕ್ಷಣಗಳು

ಬದುಕು ಇಂದು ಬದಲಾಗಿದೆ , ಜವಾಬ್ದಾರಿಯ ಮೂಟೆ ಹೊತ್ತಿದೆ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ ಸಾಗಿದೆ

ಇಂದೂ ಕೂಡ, ನಮ್ಮ ನಾಳೆಗೆ ಮತ್ತೆಬಾರದ ದಿನವೇ ಆಗಿದೆ
ಪ್ರತೀ ಘಳಿಗೆಯ ರಸವ ಹೀರುವ ಮಾನಸ ಬುದ್ದಿಯು ಮಾಡಬೇಕಿದೆ

ಬಾಲ್ಯ , ಯವ್ವನ , ಮದ್ಯ , ಮುಪ್ಪಿನ ಎಲ್ಲ ಅನುಭವ ಶ್ರೇಷವು
ಮೇಲು ಕೀಳು ಮಾಡದೇನೆ , ಬದುಕು ಬದುಕುವ ನಿತ್ಯವೂ
ಕಳೆದು ಹೋದುದು ಬರದು ಎಂದೂ , ಇದೇ ಲೋಕದ ಸತ್ಯವು

ಶ್ರೀನಿವಾಸ ಮಹೇಂದ್ರಕರ್

Comments

Popular posts from this blog

ಸ್ಮಶಾನ ವೈರಾಗ್ಯ

ಜಾರಬೇಡ ನಾರಿ

ನಿದ್ರೆ ಬಾರದ ದಿನಗಳು